ಅಸ್ಸಿಸಿ ಶಾಲೆಯಲ್ಲಿ ದೀಪಾವಳಿಯ ಕಲರವ
ಚಿಕ್ಕೋಡಿ : ಇಲ್ಲಿಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ ಶನಿವಾರ ದಿನಾಂಕ 9/11/2024 ರಂದು ಸಾಯಂಕಾಲ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚಿಕ್ಕೋಡಿಯ ಸಲಗರೆ ಚಿಕ್ಕ ಮಕ್ಕಳ ಆಸ್ಪತ್ರೆಯ ವೈದ್ಯರಾದ ಶ್ರೀಯುತ ಡಾ. ರಾಜೇಂದ್ರ ಸಲಗರೆ ಹಾಗೂ ಅವರ ಧರ್ಮಪತ್ನಿಯಾದ ಶ್ರೀಮತಿ ಡಾ. ಜಯಲಕ್ಷ್ಮೀ ಸಲಗರೆ ಅವರು ಮತ್ತು ಚಿಕ್ಕೋಡಿಯ ನ್ಯಾಯಾಲಯದ ಸೀನಿಯರ್ ಸಿವಿಲ್ ಜಡ್ಜರಾದ ಶ್ರೀ ಹರೀಶ್ ಪಾಟೀಲ ಅವರು ಮತ್ತು ಶಾಲೆಯ ಪ್ರಾಂಶುಪಾಲರಾದ ಫಾದರ್ ಜೇಸನ್ ಫರ್ನಾಂಡಿಸ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಪ್ರಾರ್ಥನಾ ಗೀತೆಯ ನೃತ್ಯದೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ತದನಂತರ ಲಕ್ಷ್ಮೀ ದೇವಿಗೆ ಪೂಜೆಯನ್ನು ನೆರವೇರಿಸಲಾಯಿತು. ದೀಪಾವಳಿ ಹಬ್ಬದ ಇತಿಹಾಸಕ್ಕೆ ಸಂಬಂಧಿಸಿದಂತೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಚರಿತ್ರೆಗೆ ಸಂಬಂಧಿಸಿದಂತೆ ಹಬ್ಬಗಳ ಮಹಿಮೆಯನ್ನು ಬಿಂಬಿಸುವ ಹಾಡುಗಳಿಗೆ ವಿದ್ಯಾರ್ಥಿಗಳು ಕಣ್ಮನ ಸೆಳೆಯುವ ನೃತ್ಯಗಳನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿಗಳಾದ ಡಾ. ರಾಜೇಂದ್ರ ಸಲಗರೆ ಅವರು ಮಾತನಾಡಿ ನಮ್ಮ ಭಾರತೀಯ ಹಬ್ಬಗಳು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿದ್ದು, ನಮ್ಮ ದೇಶದ ಜನರ ಜೀವನ, ಸಂಸ್ಕೃತಿ ಹಾಗೂ ಪರಂಪರೆಯಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂಥವು ಎಂದು ಹೊಗಳಿದರು. ತದನಂತರ ಸಿಡಿಮದ್ದುಗಳ ಸಂಭ್ರಮದಲ್ಲಿ ಅಸ್ಸಿಸಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅತ್ತ್ಯುತ್ಸಾಹದಿಂದ ಪಾಲ್ಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂದು ದೀಪಾವಳಿಯ ಅಂಗವಾಗಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪಗಳ ಅಲಂಕಾರದ ಸ್ಪರ್ಧೆ ಹಾಗೂ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ದೀಪಗಳನ್ನು ಅಲಂಕರಿಸಿ, ಮನಸೆಳೆಯುವ ಸುಂದರ ರಂಗೋಲಿ ಚಿತ್ರಗಳನ್ನು ಅರಳಿಸಿದ್ದರು. ಅಸ್ಸಿಸಿಯ ಮಹಾದ್ವಾರದ ಬಳಿಯ ದಾರಿಯು ಬಣ್ಣ ಬಣ್ಣದ ರಂಗೋಲಿಯ ಚಿತ್ರಗಳಿಂದ ಹಾಗೂ ಸಭಾ ಭವನವು ದೀಪಗಳ ಅಲಂಕಾರದಿಂದ ಶೃಂಗಾರಗೊಂಡಿತ್ತು. ಒಟ್ಟಿನಲ್ಲಿ ಅಂದು ಅಸ್ಸಿಸಿ ಶಾಲೆಯ ಪ್ರಾಂಗಣವು ದೀಪಗಳ ಬೆಳಕಿನಲ್ಲಿ ಹಾಗೂ ರಂಗೋಲಿಯ ಚಿತ್ತಾರಗಳಿಂದ ಕಂಗೊಳಿಸುತ್ತಿತ್ತು.
ಶಾಲೆಯ ಪ್ರಾಂಶುಪಾಲರಾದ ಫಾದರ್ ಜೇಸನ್ ಫರ್ನಾಂಡೀಸ್ ಹಾಗೂ ಫಾದರ್ ಸ್ಟೆನಿಸ್ ಲೋಪಿಸ್ ಮತ್ತು ಶಾಲೆಯ ಎಲ್ಲ ಶಿಕ್ಷಕ-ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.