“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷಣೆಯಂತೆ ಮೈಸೂರು ರಾಜ್ಯವು ಕರ್ನಾಟಕ ಎಂಬ ಅರ್ಥಪೂರ್ಣ ಹೆಸರನ್ನು ಹೊಂದಿ 50 ವರ್ಷ ಪೂರ್ಣಗೊಳಿಸಿದ ಸುಸಂದರ್ಭದಲ್ಲಿ ಚಿಕ್ಕೋಡಿಯ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ 2023 ನವೆಂಬರ್ 1 ರಂದು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ‘ಭಾರತ ಮಾತೆಯ ಮಗಳಾದ ಕನ್ನಡಾಂಬೆ ನಿನಗೆ ಜಯವಾಗಲಿ’ ಎಂಬ ವಿಶಿಷ್ಟ ಅರ್ಥವನ್ನು ಒಳಗೊಂಡಿರುವ “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂಬ ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ನಮ್ಮ ಶಾಲೆಯ ವಿದ್ಯಾರ್ಥಿಗಳು ನಾಡು-ನುಡಿಯನ್ನು ಪ್ರತಿಬಿಂಬಿಸುವಂತಹ ಹಾಡುಗಳಿಗೆ ನೃತ್ಯ ಮಾಡಿದರಲ್ಲದೇ, ಕರ್ನಾಟಕದ ಜನಪದರ ಹಾಗೂ ಜನಪದ ಸಾಹಿತ್ಯದ ಸತ್ವವನ್ನು ಸಾರುವಂತಹ “ಪುಣ್ಯಕೋಟಿ” ಹೆಸರಿನ “ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದೊಳಿರುವ …..” ಎಂಬ ಜನಪದ ಗೀತೆಗೆ ನೃತ್ಯದ ಜೊತೆಗೆ ನಟನೆ ಮಾಡಿ ಕನ್ನಡ ಜನಪದ ಸಾಹಿತ್ಯದಲ್ಲಿ ಅಡಗಿರುವ ಪ್ರತಿಭೆ ಹಾಗೂ ಸತ್ವವನ್ನು ಪ್ರಸ್ತುತಪಡಿಸಿದರು.
ಶಾಲೆಯ ಪ್ರಾಂಶುಪಾಲರಾದ ಫಾದರ್ ಜೇಸನ್ ಫರ್ನಾಂಡೀಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಕನ್ನಡ ನಾಡು ಇದು ಶಿಲ್ಪ ಕಲೆಗಳ ತವರೂರು ಹಾಗೂ ಹಸಿರು ಗಿರಿಗಳ ಮತ್ತು ಶಾಂತಿಯ ನಾಡು ಎಂದು ವರ್ಣಿಸಿದರು. ಶಾಲೆಯ ಶಿಕ್ಷಕಿಯಾದ ಶ್ರೀಮತಿ ಅಶ್ವಿನಿ ಜಾಧವ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಾಲಾ ಸಂಸತ್ತಿನ ನಾಯಕಿಯಾದ ವಿದ್ಯಾರ್ಥಿನಿ ಕುಮಾರಿ ಜಾಗೃತಿ ಹುಕ್ಕೇರಿ ಹಾಗೂ ಉಪನಾಯಕಿಯಾದ ಕುಮಾರಿ ದರ್ಶನಾ ಚೌದರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಾಗೂ ಶಾಲೆಯ ಎಲ್ಲ ಶಿಕ್ಷಕ-ಸಿಬ್ಬಂದಿ ವರ್ಗ, ಎಲ್ಲ ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರು ಉಪಸ್ಥಿತರಿದ್ದರು.